ಮಚಲೀಪಟ್ಟಣ
	ಆಂಧ್ರ ಪ್ರದೇಶದ ಕೃಷ್ಣಾಜಿಲ್ಲೆಯ ಮತ್ತು ಮಚಲೀಪಟ್ಟಣ ತಾಲ್ಲೂಕಿನ ಆಡಳಿತ ಕೇಂದ್ರನಗರ. ಕೃಷ್ಣಾನದೀ ಮುಖಜಭೂಮಿಯ ಹಾಗೂ ಬಂಗಾಳಕೊಲ್ಲಿಯ ಪಶ್ಚಿಮತೀರದ ಒಂದು ಬಂದರು. ಈ ನಗರ ಆಂಧ್ರ ಪ್ರದೇಶದ ಪೂರ್ವ ಸಮುದ್ರ ತೀರದಲ್ಲಿದ್ದು ಒಂದು ವ್ಯಾಪಾರ ಕೇಂದ್ರವಾಗಿದೆ. ವಿಸ್ತೀರ್ಣ ಸುಮಾರು 25 ಚಕಿಮೀ. ಜನಸಂಖ್ಯೆ 138,530 (1981).

	ಬಂದರು ನಗರವಾಗಿ ಸಮುದ್ರವ್ಯಾಪಾರಕ್ಕೆ ಅನುಕೂಲವಾಗಿರುವಂತೆ ಈ ನಗರ ಭೂವ್ಯಾಪಾರ ಕೇಂದ್ರವೂ ಆಗಿದೆ. ಇದೊಂದು ಮುಖ್ಯ ರೈಲು ನಿಲ್ದಾಣ. ಬತ್ತ ಮತ್ತು ಎಣ್ಣೆ ಗಿರಣಿಗಳಿವೆ. ಹಾಸುಗಂಬಳಿಗಳ ಮತ್ತು ವೈe್ಞÁನಿಕ ಉಪಕರಣಗಳ ತಯಾರಿಕೆ ಇಲ್ಲಿಯ ಮುಖ್ಯ ಕೈಗಾರಿಕೆಗಳು. ಅಖಿಲಭಾರತ ನೂಲುಗಾರರ ಸಂಘದ ಕೇಂದ್ರ ಕಚೇರಿ ಇಲ್ಲಿದೆ. ಒಂದು ಎಂಜಿನಿಯರಿಂಗ್ ಕಾಲೇಜಿನ ಜೊತೆಗೆ ಇತರ ಮೂರು ಕಾಲೇಜುಗಳಿವೆ. ಇಲ್ಲಿಂದ ರಫ್ತಾಗುವ ವಸ್ತುಗಳಲ್ಲಿ ಮುಖ್ಯವಾದವು ಕಬ್ಬಿಣ ಹಾಗೂ ಬಟ್ಟೆ.

	ಹಿಂದೆ ಬೆಸ್ತನೊಬ್ಬ ಸೆರೆಹಿಡಿದ ದೈತ್ಯ ಮೀನಿನ ಎಲುಬುಗಳಿಂದ ರೇವಿಗೆ ಪ್ರವೇಶದ್ವಾರ ನಿರ್ಮಿಸಿದ್ದುದರಿಂದ ಈ ನಗರಕ್ಕೆ ಮತ್ಸಲಿ ಎಂಬ ಹೆಸರು ಬಂತೆಂದೂ ಮುಂದೆ ಮಚಲಿ ಎಂಬ ರೂಪ ಪಡೆಯಿತೆಂದೂ ಇಲ್ಲಿಯ ಮಂದಿ ಹೇಳುತ್ತಾರೆ. ಕ್ರಿಸ್ತಪೂರ್ವದಲ್ಲಿ ಗ್ರೀಕ್ ಭೂಗೋಳಶಾಸ್ತ್ರಜ್ಞರು ಉಲ್ಲೇಖಿಸುವ ಮಸೋಲಿಯಾ ಇದೇ ಸ್ಥಳವೆನ್ನುವುದು ಕೆಲವರ ಅಭಿಪ್ರಾಯ. ಕ್ರಿ.ಶ. 3ನೆಯ ಶತಮಾನದಲ್ಲಿ ಧರಣಿಕೋಟದಲ್ಲಿ ರಾಜ್ಯವಾಳಿದ ಮುಕ್ಕಂಟಿ ಅಥವಾ ತ್ರಿಲೋಚನ ಪಲ್ಲವ ಈ ಸ್ಥಳಕ್ಕೆ ಸಮೀಪದ ಇನುಕುದುರುವನ್ನು ತನ್ನ ವಾಸಸ್ಥಳವಾಗಿ ಮಾಡಿಕೊಂಡದ್ದರಿಂದ ಆ ಪ್ರದೇಶಕ್ಕೆ ರಾಜುಪೇಟೆ ಎಂಬ ಹೆಸರು ಬಂದಿತೆನ್ನಬಹುದು.

	1425ರಲ್ಲಿ ಹಿಂದೂರಾಜರ ಔದಾರ್ಯದಿಂದ ತುರುಕ ಸೈನಿಕರಿಗಾಗಿ ದೊಡ್ಡ ಮಸೀದಿಯೊಂದನ್ನು ಇಲ್ಲಿ ನಿರ್ಮಿಸಲಾಯಿತು. 1478ರಲ್ಲಿ ಮಹಮ್ಮದ್ ಷಾ ಈ ನಗರವನ್ನಾಕ್ರಮಿಸಿದ. ಸ್ವಲ್ಪಕಾಲ ವಡ್ಡೆ ರಾಜರಿಗೆ ಸೇರಿದ ಈ ನಗರ 1518ರಲ್ಲಿ ಗೋಲ್ಕೊಂಡದ ಕುತುಬ್ ವಂಶಸ್ಥರ ಹಸ್ತಗತವಾಯಿತು. 1557ರಲ್ಲಿ ಕೊಂಡಪಲ್ಲಿ ಪ್ರಭುವಾದ ಸಿದ್ಧರಾಜು ತಿಮ್ಮಪ್ಪನ ವಶವಾಗಿ ಮತ್ತೆ 1579ರಲ್ಲಿ ಮಹಮ್ಮದೀಯರ ಪಾಲಾಯಿತು. ಮಹಮ್ಮದ್ ಷಾ ಆಳುವಾಗ ಪೋರ್ಚುಗೀಸರು ಇಲ್ಲಿಗೆ ಬಂದಿದ್ದರು. 1611ರಲ್ಲಿ ಇಂಗ್ಲಿಷರು ವ್ಯಾಪಾರ ನಿಮಿತ್ತವಾಗಿ ಬಂದು ಸೇರಿದರು. ಅನಂತರ ಡಚ್ಚರೂ ಫ್ರೆಂಚರೂ ಬಂದರು. ವ್ಯಾಪಾರ ಸಂಬಂಧದಲ್ಲಿ ಕೋಠಿಗಳನ್ನು ಕಟ್ಟಿಸಿದರು. ಕ್ರಮೇಣ ಅಧಿಕಾರಕ್ಕಾಗಿ ಹೋರಾಟ ನಡೆದು ಅಂತಿಮವಾಗಿ ಇಂಗ್ಲಿಷರಿಗೆ ಜಯ ಲಭಿಸಿತು.

	ಆಂಧ್ರ ಬ್ಯಾಂಕ್, ಹಿಂದೂಸ್ಥಾನ್ ವಿಮಾ ಕಂಪನಿ, ಆಂಧ್ರ ಸೈಂಟಿಫಿಕ್ ಕಂಪನಿ ಮುಂತಾದವುಗಳ ಕೇಂದ್ರ ಸ್ಥಳವಿದು. 1902ರಲ್ಲಿ ಆರಂಭವಾದ "ಕೃಷ್ಣಾಪತ್ರಿಕೆ" ಮೊದಲು ದೇಶಭಕ್ತ ಕೊಂಡ ವೆಂಕಟಪ್ಪಯ್ಯ ಪಂತುಲು ಹಾಗೂ ತರುವಾಯ ಶ್ರೀ ಮಟ್ನೂರಿ ಕೃಷ್ಣಾರಾವು ಅವರ ಸಂಪಾದಕತ್ವದಲ್ಲಿ ಹೊರಬಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಹುರುಪು ನೀಡಿದವು.

	ಮಚಲೀಪಟ್ಟಣಕ್ಕೆ ಸಮೀಪದ ಕರಿಪಟ್ಟಣ ಒಂದು ಪ್ರಾಚೀನ ಸ್ಥಳ. ಅಲ್ಲಿ ಕೋದಂಡ ರಾಮೇಶ್ವರ ಸೋಮೇಶ್ವರ ವೀರಭದ್ರ ಪಟ್ಟಾಭಿರಾಮಸ್ವಾಮಿ ಹಾಗೂ ನಾಗೇಶ್ವರ ದೇವಾಲಯಗಳಿವೆ. ವೀರಭದ್ರ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಭಾರಿ ಉತ್ಸವ ನಡೆಯುತ್ತದೆ. ಕರಿಪಟ್ಟಣ ಪ್ರಾಚೀನ ಕಾಲದಲ್ಲಿ ದಟ್ಟ ಅರಣ್ಯ ಪ್ರದೇಶವಾಗಿತ್ತಂತೆ. ಆಗ ಇದ್ದಂಥ ವಿಠಲೇಶ್ವರ ದೇವಾಲಯ ಸಮುದ್ರ ಉಕ್ಕಿ ನಾಶವಾಯಿತೆಂದು ಹೇಳುತ್ತಾರೆ. ಬಂದರಿನಲ್ಲಿ ಪ್ರತಿವರ್ಷ ಚೈತ್ರ ಪೌರ್ಣಿಮೆಯಂದು ನಡೆಯುವ ಶಿವಗಂಗಮ್ಮ ಉತ್ಸವ ಬಹಳ ವೈಭವದಿಂದ ನಡೆಯುತ್ತದೆ. 1864ರಲ್ಲಿ ಬಿರುಗಾಳಿಗೆ ಮತ್ತು ಸಮುದ್ರ ಉಕ್ಕೇರಿ ಬಂದ ಪ್ರವಾಹಕ್ಕೆ ಸುಮಾರು 30,000 ಮಂದಿ ಬಲಿಯಾದರೆಂದು ತಿಳಿದುಬಂದಿದೆ.						
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ